ಡುಂಡಿರಾಜರ ಚುಟುಕುಗಳು

ಡುಂಡಿರಾಜರ ಚುಟುಕುಗಳು

ಕವಿ
ಕವಿ ಪುಂಗವನೆಂಬ ಗುಂಗಿನಲ್ಲಿ
ಹುಡುಗಿಯರಬಳಿ ಪ್ರೇಮ ಕಾವ್ಯದ
ಪುಂಗಿ ಊದಿದೆ
ಪರಿಣಾಮ ನನ್ನ ಎಡಗೆನ್ನೆ
ಸ್ವಲ್ಪ ಊದಿದೆ!

ನಗು
ಅವಳು ಅಕಾಸ್ಮಾತ್ ಸಿಕ್ಕಳು
ನನ್ನನು ನೋಡಿ ನಕ್ಕಳು
ನಮಗೀಗ ಎರಡು ಮಕ್ಕಳು

ಲಿಂಗ
ನಲ್ಲ ಪುಲ್ಲಿಂಗ
ನಲ್ಲೆ ಸ್ತ್ರೀಲಿಂಗ
ಏಕಾಂತದಲ್ಲಿ ಭೇದವೆಲ್ಲಿ
ಇಬ್ಬರೂ ಒಂದೇ
ದಾರ್ಲಿಂಗ

ಚೆಲುವು
ನಿನ್ನ ಚೆಲುವು ನೋಡಲಿಕ್ಕೆ
ಸಾಲದು ಎರಡು ಅಕ್ಷಿ
ಎಂಬುದಕ್ಕೆ ಪ್ರಿಯೆ ನನ್ನ
ಕನ್ನಡಕವೇ ಸಾಕ್ಷಿ

ಬಡವ
ಬಡವನಾದರೂ ಪ್ರಿಯೆ
ಹೃದಯ ಸಂಪತ್ತಿನಲ್ಲಿ ನಾನು
ಟಾಟಾ ಬಿರ್ಲಾ
ಎಂದ ತಕ್ಷಣ
ಹುಡುಗಿ ಹೇಳಿದಳು
ಹಾಗಾದ್ರೆ ಟಾಟಾ ಬರ್ಲಾ

ಸಮಸ್ಯೆ
ನೀನಿಲ್ಲದೆ ಪ್ರಿಯೆ ನಾನು ನಿಜವಾಗಿಯೂ
ತಬ್ಬಲಿ
ಮೈ ಕೊರೆಯುವ ಚಳಿಯಲ್ಲಿ ಯಾರನ್ನು
ತಬ್ಬಲಿ

ಕಂಬಳಿ
ಹೇಗೆ ತಡೆಯಲಿ
ಮೈ ನಡುಗುವ ಚಳಿ?
ಇಲ್ಲ ನನ್ನ ಬಳಿ ಹೊದೆಯಲು
ಕಂಬಳಿ
ಆದ್ದರಿಂದ ಪ್ರಿಯೆ ನೀನೆ
COMEಬಳಿ

ಸತ್ಯ
ಸುಳ್ಳಿಗೆ ಸುಳ್ಳು ಸೇರಿದರೆ
ಸತ್ಯ
ಉದಾಹರಣೆಗೆ ನಮ್ಮ
ದಾಂಪತ್ಯ

ಸಮಾಧಾನ
ನಿಜಕ್ಕೂ ಬೇಸರದ ಸಂಗತಿ
ಪ್ರಿಯೆ ನನಗೆ ವಯಸ್ಸಾಗುತ್ತಿದೆ
ಆದರೆ
ಒಂದು ಸಮಾಧಾನ
ನಿನಗೂ ಆಗುತ್ತಿದೆ

ವಿವಾದಾತೀತ
ನನ್ನ ಕೃತಿಗಳೆಲ್ಲ
ವಿವಾದಾತೀತ
ಕಾರಣ ತುಂಬಾ ಸರಳ
ನಾನು ಬರೆಯುವುದು
ನನ್ನವಳ ಬಗ್ಗೆ
ಅವಳು ಓದುವುದೇ ಇಲ್ಲ!

ಮಾರ್ಪಾಟು
ಆರಂಬದಲ್ಲಿ ಅತ್ಯಂತ
ಚೆಲುವಾದ ಹೆಂಡತಿ
ಬರಬರುತ್ತಾ ಚೆಲುವಿಗಿಂತ
ವಾದವೇ ಜಾಸ್ತಿ

ಅವರು ಇವರು
ಅವರು ಇನ್ನೂ
ಅವಿವಾಹಿತರು
ಪರಸ್ಪರ ಪ್ರೀತಿಸುತ್ತಿದ್ದಾರೆ
ಇವರು ವಿವಾಹಿತರು
ಪ್ರೀತಿ ಸುತ್ತಿದ್ದಾರ